ಮಡಪ್ಪಾಡಿ: ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ಅನಾರೋಗ್ಯ ಪೀಡಿತ ವೃದ್ಧರೊಬ್ಬರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಚಿಕಿತ್ಸೆಗೆ ಹೊತ್ತುಕೊಂಡು ಹೋದ ಘಟನೆ ಮಡಪ್ಪಾಡಿ ಗ್ರಾಮದ ನಡುಬೆಟ್ಟು ಎಂಬಲ್ಲಿ ನಡೆದಿದೆ.
ಮಡಪ್ಪಾಡಿ ಗ್ರಾಮದ ನಡುಬೆಟ್ಟು ಭಾಗದಲ್ಲಿ ಸುಮಾರು ಹದಿನಾಲ್ಕು ಮನೆಗಳಿವೆ. ಆ ಭಾಗವನ್ನು ಸಂಪರ್ಕಿಸಲು ಕಚ್ಚಾ ರಸ್ತೆ ಇದ್ದು, ಅದು ಸಂಪೂರ್ಣ ಹದಗೆಟ್ಟಿದೆ. ವಾಹನ ಸಂಚರಿಸಲೂ ಅಸಾಧ್ಯವಾದ ಪರಿಣಾಮ ಯಾವೊಂದು ವಾಹನಗಳನ್ನು ಚಲಾಯಿಸಲು ಮಾಲಕರು ಒಪ್ಪುತ್ತಿಲ್ಲ. ಹೀಗಾಗಿ ಅನಾರೋಗ್ಯ ಬಾಧಿತ ವೃದ್ಧರೊಬ್ಬರನ್ನು ಅನಿವಾರ್ಯವಾಗಿ ಚಿಕಿತ್ಸೆಗೆ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಆಧುನಿಕ ಕಾಲಘಟ್ಟದಲ್ಲಿ ಬಹುತೇಕ ಗ್ರಾಮಗಳು ರಸ್ತೆ, ಮೂಲಭೂತ ಸೌಕರ್ಯಗಳನ್ನು ಹೊಂದಿವೆ. ಆದರೆ ಮಡಪ್ಪಾಡಿಯಂತಹ ಕುಗ್ರಾಮದಲ್ಲಿ ಹಲವೆಡೆ ಹೆಸರಿಗಷ್ಟೇ ರಸ್ತೆ ಇದೆ. ಈ ರಸ್ತೆಯಲ್ಲಿ ಕಡಿದಾದ ಜಾಗಗಳಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳಾಗಿರುವ ಕಾರಣ ಬೇಸಿಗೆ ಕಾಲದಲ್ಲಿ ಮಾತ್ರ ಜೀಪು , ಪಿಕಪ್ ಗಳು ಮಾತ್ರ ಕಷ್ಟದಲ್ಲಿ ಈ ರಸ್ತೆಯಲ್ಲಿ ಸಂಚರಿಸುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಯಾವ ವಾಹನಗಳು ಕೂಡಾ ಸಂಚರಿದ ಪರಿಸ್ಥಿತಿ ಇದೆ. ಹೀಗಾಗಿ ಎಲ್ಲಾ ರೀತಿಯ ಕೃಷಿ ಉತ್ಪನ್ನ ಮತ್ತು ಮನೆ ಸಾಮಗ್ರಿ ಗಳನ್ನು ಹೊತ್ತುಕೊಂಡು ಒಯ್ಯಬೇಕಾಗಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.