ಕಲ್ಮಡ್ಕ: ಸ್ವಿಪ್ಟ್ ಕಾರಿನಲ್ಲಿ ಅಕ್ರಮ ಗೋಸಾಗಾಟ| ಬೆಳ್ಳಾರೆ ಠಾಣೆ ಪೊಲೀಸರಿಂದ ದಾಳಿ

ನಿಂತಿಕಲ್ಲು: ಕಾರಿನಲ್ಲಿ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿಯಂತೆ ಬೆಳ್ಳಾರೆ ಠಾಣಾ ಎಸೈ ಈರಯ್ಯ ಡಿ.ಎನ್‌. ಅವರ ನೇತೃತ್ವದಲ್ಲಿ ದಾಳಿ ನಡೆಸಲಾದ ಘಟನೆ ಕಲ್ಮಡ್ಕ ಎಂಬಲ್ಲಿ ಸೋಮವಾರ(ಅ.14) ರಾತ್ರಿ ನಡೆದಿದೆ.

ಪೊಲೀಸರು ದಾಳಿ ನಡೆಸುವ ವೇಳೆ ಸ್ವಿಪ್ಟ್ ಕಾರಿನಲ್ಲಿ ಹಿಂಸಾತ್ಮಕವಾಗಿ ಮೂರು ದನಗಳನ್ನು ತುಂಬಿರುವುದು ಕಂಡುಬಂದಿದೆ.

ಕಾರಿನ ಸಮೀಪದಲ್ಲೇ ತೆರೆದ ಕೊಟ್ಟಿಗೆಯಲ್ಲಿ 2 ಜಾನುವಾರುಗಳು ಕಂಡುಬಂದಿದ್ದು ಅದನ್ನು ಮೂವರು ವ್ಯಕ್ತಿಗಳು ಬಿಚ್ಚಲು ಯತ್ನಿಸುತ್ತಿದ್ದು ಪೊಲೀಸರನ್ನು ಕಂಡು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಅಕ್ರಮ ಸಾಗಾಟಕ್ಕೆ ಯತ್ನಿಸಲಾಗಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.