ಸುಳ್ಯ:ಹೇಳಿಕೆ ಪಡೆಯಲು ಬಂದ ಜಡ್ಜ್ ಎದುರು ದರ್ಪ ತೋರಿದ ವೈದ್ಯೆ; ದೂರು ದಾಖಲು

ಸುಳ್ಯ: ಕಾಸರಗೋಡಿನ ದೇಲಂಪಾಡಿ ಮೂಲದ ಮಹಿಳೆಯೋರ್ವರು ಆತ್ಮಹತ್ಯೆ ಯತ್ನ ನಡೆಸಿದ್ದಾರೆಂಬ ಬಗ್ಗೆ ಅದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌ ಈ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯಿಂದ ಹೇಳಿಕೆ ಪಡೆಯುವ ಉದ್ದೇಶದಿಂದ ಸುಳ್ಯಕ್ಕೆ ಆದೂರು ಪೋಲಿಸ್ ಅಧಿಕಾರಿಗಳ ಜತೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಇಂಟಿಮೇಶನ್ ನೀಡಿದ ಬಳಿಕ ಬಂದಿದ್ದ ನ್ಯಾಯಾದೀಶರ ಎದುರು ವೈದ್ಯೆಯೋರ್ವರು ದರ್ಪ ತೋರಿದ್ದು, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ನ್ಯಾಯಾದೀಶರು ಭೇಟಿ ನೀಡುವ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರಾದ ವಿನ್ಯಾಸ್ ಕರ್ತವ್ಯದಲ್ಲಿದ್ದರು. ನ್ಯಾಯಾದೀಶರು ಬಂದು ವಿಚಾರಿಸಿದಾಗ ವಿನ್ಯಾಸ್ ರವರು ಹಿರಿಯ ಡಾಕ್ಟರ್ ಬರಬೇಕು ಅವರೇ ಮಾಹಿತಿ ನೀಡಬೇಕಿದೆ ಎಂದು ತಿಳಿಸುತ್ತಾರೆ.

ಈ ವೇಳೆ ಆಗಮಿಸಿದ ಡಾ| ಸೌಮ್ಯರವರು ನ್ಯಾಯಾಧೀಶರು ಬಂದಿದ್ದಾರೆ ಎಂದು ತಿಳಿದಿದ್ದರೂ ಅವರಿಗೆ ಸರಿಯಾಗಿ ಮಾಹಿತಿ ಮತ್ತು ದಾಖಲೆಗಳನ್ನು ನೀಡದೇ ಉದ್ಧಟತನ ತೋರಿದ ಆರೋಪ ಕೇಳಿ ಬಂದಿದೆ. ಈ ಘಟನೆಯು ಸೆ.21 ರಂದು ರಾತ್ರಿ ನಡೆದಿದ್ದು ಇದಾದ ಬಳಿಕ ನ್ಯಾಯಾಧೀಶರಾದ ಅದ್ದುಲ್ ಭಾಷಿತ್ ಸುಳ್ಯ ಠಾಣೆಗೆ ಖುದ್ದಾಗಿ ತೆರಳಿ ಬೆಳಗ್ಗೆವರೆಗೆ ಕಾದು ದೂರು ದಾಖಲಿಸಿದ್ದರು. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.