ಪಂಜ: ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಮನೆಯ ಬಳಿಯಿಂದ ಸಾಕು ನಾಯಿಗಳು ನಾಪತ್ತೆಯಾಗಿದ್ದು, ಅವುಗಳನ್ನು ಚಿರತೆಗಳು ಎಳೆದೊಯ್ದಿದೆ ಎನ್ನುವ ಸುದ್ದಿ ಕೋಡಿಂಬಾಳ ಬಳಿಯ ಪುಳಿಕುಕ್ಕು, ಪಂಜ, ನೇರಳ ಪರಿಸರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪಂಜ ಬಳಿಯ ಕರುಂಬು ನೆಕ್ಕಿಲ ನಿವಾಸಿ ರಾಮಚಂದ್ರ ಭಟ್ ಅವರ 2 ಸಾಕುನಾಯಿಗಳು ಆ. 28 ರಂದು ರಾತ್ರಿ ವೇಳೆ ಗೂಡಿನಿಂದ ಹೊರ ಬಿಟ್ಟ ಬಳಿಕ ತೋಟದತ್ತ ಹೋಗಿದ್ದು ಅನಂತರ ನಾಪತ್ತೆಯಾಗಿವೆ. ಅವರ ಪಕ್ಕದ ಮನೆಯ ಸಿಟೌಟ್‌ನಲ್ಲಿ ರಾತ್ರಿ ವೇಳೆ ಮಲಗಿದ್ದ ಸಾಕುನಾಯಿ ಕೂಡ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಸಿಟೌಟ್‌ನಲ್ಲಿ ನಾಯಿ ಮಲ ವಿಸರ್ಜಿಸಿದ್ದು, ಯಾವುದೋ ಪ್ರಾಣಿಯ ಜೊತೆ ಕಾದಾಡಿದ ರೀತಿಯಲ್ಲಿ ಕೆಸರು ಮತ್ತು ಹೆಜ್ಜೆ ಗುರುತುಗಳ ಕುರುಹುಗಳು ಕಂಡುಬಂದಿವೆ ಎಂದು ಮಾಹಿತಿ ನೀಡಿದ್ದಾರೆ.
ಪರಿಸರದ ಬೊಳ್ಳಾಜೆ, ಪೊಳೆಂಜ, ನೆಕ್ಕಿಲ, ನೇರಳ ಮುಂತಾದ ಪ್ರದೇಶದಲ್ಲಿ ಈ ಹಿಂದೆ ಮರಿಗಳ ಜೊತೆ ಎರಡು ಚಿರತೆಗಳು ಕಾಣಿಸಿಕೊಂಡಿತ್ತು ಎನ್ನುವ ಸುದ್ದಿ ಹರಡಿದ್ದು, ಕಾಣೆಯಾಗಿರುವ ನಾಯಿಗಳು ಚಿರತೆ ಪಾಲಾಗಿರಬಹುದು ಎನ್ನುವ ಅಭಿಪ್ರಾಯ ಸ್ಥಳೀಯರದ್ದು. ನಾಯಿಗಳನ್ನು ಚಿರತೆ ಹೊತ್ತೂಯ್ದಿದೆ ಎನ್ನುವ ಸುದ್ದಿಯಿಂದಾಗಿ ಆತಂಕಗೊಂಡಿರುವ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖಾ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.