ಗುತ್ತಿಗಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ವತಿಯಲ್ಲಿ ವಲಯ ಭಜನಾ ಪರಿಷತ್ ಸಭೆ ಮತ್ತು ವಲಯ ಜನಜಾಗೃತಿ ಸಭೆಯನ್ನು ವಲಯ ಭಜನಾ ಪರಿಷತ್ ನ ಅಧ್ಯಕ್ಷ ವೆಂಕಟ್ ಹುಲಿಕೆರೆರವರ ಅಧ್ಯಕ್ಷತೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಪವರ್ಗ ಸಭಾಭವನದಲ್ಲಿ ನಡೆಯಿತು.

ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಬಾಬು ಗೌಡ ಅಚ್ರಪ್ಪಾಡಿ ಮಾವಿನಕಟ್ಟೆರವರು ದೀಪ ಪ್ರಜ್ವಲಿಸಿ ಶುಭಕೋರಿದರು. ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಅಧ್ಯಕ್ಷ ಯತೀಶ್ ರೈ ದುಗಲಡ್ಕರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ.22 ರಿಂದ ಸೆ.29ರ ತನಕ ಭಜನಾ ಕಮ್ಮಟ ಕಾರ್ಯಕ್ರಮ ನಡೆಯಲಿದೆ. ಈ ಭಜನಾ ಕಮ್ಮಟ ಕಾರ್ಯಕ್ರಮಕ್ಕೆ ವಲಯದಿಂದ ಭಜನಾ ಮಂಡಳಿಗಳಿಂದ ಎರಡು ಮಂದಿಯಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಿ ಕೊಡಬೇಕು. ಸೆ.29ರಂದು ನಡೆಯುವ ಭಜನಾ ಮಂಗಲೋತ್ಸವ ಕಾರ್ಯಕ್ರಮಕ್ಕೆ ವಲಯದ ಎಲ್ಲಾ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಬೇಕು. ತಾಲೂಕು ಮಟ್ಟದಲ್ಲಿ ನಡೆಯುವ ಭಜನೋತ್ಸವ ಕಾರ್ಯಕ್ರಮಕ್ಕೆ ಕೂಡ ಎಲ್ಲಾ ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಬೇಕು ಎಂದು ಹೇಳಿದರು.

ವಲಯ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಮಿತ್ರದೇವ ಮಡಪ್ಪಾಡಿರವರು ಮಾತನಾಡುತ್ತಾ, ವಲಯದಲ್ಲಿ ಪ್ರಸ್ತುತ ವರ್ಷದಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮದ ಬಗ್ಗೆ ಹೇಳಿದರು. ಮುಂದಿನ ಒಂದು ತಿಂಗಳ ಒಳಗೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಹಾಗೂ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಲಯದಲ್ಲಿ ಇರುವ ನವಜೀವನ ಸಮಿತಿ ಸಭೆಯನ್ನು ಬಲಪಡಿಸಬೇಕು, ಯೋಜನೆಯ ಕಾರ್ಯಕರ್ತರ ಜೊತೆಗೆ ಜನಜಾಗೃತಿಯ ಪದಾಧಿಕಾರಿಗಳು ಕೂಡ ನವಜೀವನ ಸಮಿತಿಯ ಸದಸ್ಯರ ಮನೆ ಭೇಟಿಯನ್ನು ಮಾಡಿ ಅವರ ಯೋಗಕ್ಷೇಮದ ಬಗ್ಗೆ ವಿಮರ್ಶೆಯನ್ನು ಮಾಡಬೇಕು ಎಂದು ಹೇಳಿದರು. ಪ್ರಾಕೃತಿಕ ವಿಕೋಪದಿಂದಾಗಿ ಆಪತ್ತುಗಳು ಎರಗಿದಾಗ ಜನಜಾಗೃತಿ ವೇದಿಕೆ ವತಿಯಿಂದ ನಡೆಯುವ ನಮ್ಮ ವಲಯದಲ್ಲಿ ಇರುವ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸೇವೆಯನ್ನು ಬಳಿಸಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ನಿರ್ದೇಶಕರು ಹಾಗೂ ತಾಲೂಕು ಜನಜಾಗೃತಿ ಸದಸ್ಯರಾದ ವಿಜಯ ಕುಮಾರ್ ಚಾರ್ಮತರವರು ಮಾತನಾಡಿ, ವಲಯದಲ್ಲಿ ಚಾಲ್ತಿಯಲ್ಲಿ ಇರುವ ಭಜನಾ ಮಂಡಳಿಗಳ ವತಿಯಲ್ಲಿ ಪ್ರತಿ ವರ್ಷ ಮಕ್ಕಳ ಭಜನಾ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ. ಈ ವರ್ಷದಲ್ಲಿ ವಿಶೇಷವಾಗಿ ಭಜನಾ ಮಂಡಳಿಗಳು ಇಲ್ಲದ ಪ್ರದೇಶದಲ್ಲಿ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟಗಳ ವತಿಯಿಂದ ಮಕ್ಕಳ ಭಜನಾ ತರಬೇತಿಯನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಕಾರವನ್ನು ಕೊಡಬೇಕು. ಮಕ್ಕಳಿಗೆ ಭಜನೆಯ ಮುಖೇನ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿಕೊಡಬೇಕು. ಎಲ್ಲಿಯೂ ಕೂಡ ಆರೋಪ ತೊಂದರೆಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಭಾಕಾರ್ಯಕ್ರಮದಲ್ಲಿ ವಲಯ ಮಟ್ಟದ ಪೂಜಾ ಕಾರ್ಯಕ್ರಮವನ್ನು ಹಾಗೂ ವಲಯ ಮಟ್ಟದ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ವಿಮರ್ಶೆ ಮಾಡಲಾಯಿತು.
ವಲಯ ಭಜನಾ ಪರಿಷತ್ ನ ಪದಾಧಿಕಾರಿಗಳು, ವಲಯ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಗ್ರಾಮ ಸಮಿತಿಯ ಅಧ್ಯಕ್ಷರುಗಳು, ಎಲ್ಲಾ ಭಜನಾ ಮಂಡಳಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಎಲ್ಲಾ ಒಕ್ಕೂಟದ ಅಧ್ಯಕ್ಷರುಗಳು, ಎಲ್ಲಾ ಸೇವಾಪ್ರತಿನಿಧಿಯವರು ಭಾಗವಹಿಸಿದರು.
ವಲಯ ಮೇಲ್ವಿಚಾರಕ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿ, ಗುತ್ತಿಗಾರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಲೋಕೇಶ್ವರ್ ಡಿ ಆರ್ ರವರು ಧನ್ಯವಾದ ಮಾಡಿ, ನಾಲ್ಕೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಹರಿಶ್ಚಂದ್ರ ಕೆ. ರವರು ನಿರೂಪಿಸಿದರು.