ಕಾಣಿಯೂರು: ಕಾಣೆಯಾಗಿದ್ದ ಯುವಕನ ಶವ ನದಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಪುತ್ತೂರು ತಾಲೂಕಿನ ಸರ್ವೆ ಎಂಬಲ್ಲಿ ಗೌರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದ ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಸನ್ಮಿತ್‌ (21) ಮೃತದೇಹ ಪತ್ತೆಯಾಗಿದೆ.

ಸರ್ವೆಯ ಗೌರಿ ಹೊಳೆಯ ಸೇತುವೆಯ ಬಳಿ ಮೃತದೇಹ ಪತ್ತೆಯಾಗಿದೆ. ಜು.19ರ ರಾತ್ರಿಯಿಂದ ಸನ್ಮಿತ್‌ ಕಾಣೆಯಾಗಿದ್ದು, ಆತನ ಸ್ಕೂಟರ್‌ ಮತ್ತಿತರ ವಸ್ತು ಸರ್ವೆ ಗೌರಿ ಹೊಳೆಯ ಸಮೀಪ ಪತ್ತೆಯಾಗಿತ್ತು. ಮೃತ ಸನ್ಮಿತ್‌ ತಂದೆ ಚಂದ್ರಗೌಡ ನೀಡಿದ ದೂರಿನಂತೆ ನಿನ್ನೆ ಬೆಳಿಗ್ಗಿನಿಂದಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹಕ್ಕಾಗಿ ಗೌರಿ ಹೊಳೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಇಂದು ರಾಜ್ಯ ವಿಪತ್ತು ನಿರ್ವಹಣಾ ಘಟಕ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಮುಂದಾಗಿದ್ದರು.

ಆ ವೇಳೆಗಾಗಲೇ ಅಗ್ನಿಶಾಮಕದಳದ ಸಿಬ್ಬಂದಿಗಳು ಮೃತದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment