ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತೃ ವಿಯೋಗ

ಸಮಗ್ರ ನ್ಯೂಸ್: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತೃ ವಿಯೋಗವಾಗಿದೆ. ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿ ಇವರಿಗೆ 97 ವರ್ಷ ವಯಸ್ಸಾಗಿತ್ತು ಅವರು ವಯೋಸಹಜ ಕಾಯಿಲೆಯಿಂದ ಜೂ.30 ರಂದು ನಿಧನರಾದರು.

ಮೃತರಿಗೆ ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಏರಿದ ಪ್ರತಿ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು, ತಾಯಿ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು. ಅಲ್ಲದೇ ಚುನಾವಣೆ ವೇಳೆ ತಾಯಿಯೊಂದಿಗೆ ತೆರಳಿ ಮತ ಚಲಾಯಿಸುತ್ತಿದ್ದರು. ಇನ್ನು ತಮ್ಮ ಯಶಸ್ಸಿನಲ್ಲಿ ತಾಯಿಯವರ ಪಾತ್ರ ಮಹತ್ವದ್ದು ಎಂದು ಯಾವಾಗಲೂ ಸ್ಮರಿಸುತ್ತಿದ್ದರು.

ಲಚ್ಚಿ ಪೂಜಾರ್ತಿ ಅವರ ನಿಧನಕ್ಕೆ ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಲಿ, ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

Leave a Comment